ಬೆಂಗಳೂರು: ದರ್ಶನ್ ಕೇಸ್ ಬಳಿಕ ಜೈಲಿನಲ್ಲಿ ರಾಜಾತಿಥ್ಯಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ಬೊಬ್ಬೆಹೊಡೆದಿದ್ದ ಪೊಲೀಸ್ ಇಲಾಖೆ ಇದೀಗ ತಲೆತಗ್ಗಿಸುವಂತ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದುಹೋಗಿದೆ. ಅತ್ತ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್ ಮೂಲ ಸೌಲಭ್ಯಗಳಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಇತ್ತ ನಟೋರಿಯಸ್ ರೌಡಿಶೀಟರ್ ಒಬ್ಬ ಪರಪ್ಪನ ಅಗ್ರಹಾರ ಜೈಲಿನಲ್ಲೇ ಭರ್ಜರಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ.
ಹೌದು… ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟೋರಿಯಸ್ ರೌಡಿಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಪರಪ್ಪನ ಅಗ್ರಹಾರದಲ್ಲೇ ಭರ್ಜರಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ. ಆ್ಯಪಲ್ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಇಷ್ಟಕ್ಕೇ ಸುಮ್ಮನಾಗದ ಅವನ ಶಿಷ್ಯಂದಿರು ಮೊಬೈಲ್‌ನಲ್ಲಿ ಬರ್ತ್ಡೇ ಪಾರ್ಟಿಯ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಜೈಲಿನಿಂದಲೇ ವಿಡಿಯೋ, ಪೋಟೋ ಪೋಸ್ಟ್ ಆಗಿದೆ. ಆ ಮೂಲಕ ಜೈಲಧಿಕಾರಿಗಳು, ಸಿಬ್ಬಂದಿಯಿಂದ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಯೆಸ್… ಪರಪ್ಪನ ಅಗ್ರಹಾರ ಜೈಲಿನೊಳಗಡೆ ಬೇರೆಯದ್ದೇ ವಾತಾವರಣ ಇದೆ. ಈಗಲೂ ಖೈದಿಗಳ ರಾಜಾರೋಷ ಪಾರ್ಟಿ ನಡೆಯುತ್ತಿದೆ. ಜೈಲಿನೊಳಕ್ಕೆ ಬರ್ತ್ ಡೇ ಕೇಕ್ ಸರಬರಾಜು ಆಗಿದೆ. ಜೊತೆಗೆ ಸೇಬಿನ ಹಾರವೂ ಪೂರೈಕೆಯಾಗಿದೆ. ಮೊಬೈಲ್ ನಲ್ಲಿ ಬರ್ತ್‌ಡೇ ಪಾರ್ಟಿಯ ಪೋಟೋ, ವಿಡಿಯೋ ಚಿತ್ರೀಕರಣವೂ ನಡೆದಿದೆ. ಇದೆಲ್ಲವೂ ಜೈಲು ಅಧಿಕಾರಿಗಳ ಬೆಂಬಲ, ಪಾತ್ರ ಇಲ್ಲದೇ ಒಳಗೆ ಪೂರೈಕೆಯಾಗಲು ಹೇಗೆ ಸಾಧ್ಯ? ಹೌದು, ರೌಡಿಶೀಟರ್ ಗುಬ್ಬಚ್ಚಿ ಸೀನನ ಬರ್ತ್‌ಡೇ ಸೆಲೆಬ್ರೇಶನ್‌ಗೆ ₹8 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಜೈಲು ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ. ಪರಪ್ಪನ ಅಗ್ರಹಾರದ ಮುಖ್ಯ ಅಧೀಕ್ಷಕ ಸುರೇಶ್, ಅಧೀಕ್ಷಕ ಮ್ಯಾಗೇರಿ, ಕರ್ಣ, ಅಶೋಕ ಭಜಂತ್ರಿ, ದಿವ್ಯಾ ಸೇರಿದಂತೆ ಇನ್ನೂ ಕೆಲವು ಅಧಿಕಾರಿಗಳು ಹಣ ಪಡೆದು ರೌಡಿಶಿಟರ್‌ಳಿಗೆ ರಾಜಾಥಿತ್ಯ ನೀಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಅಲ್ಲಿನ ರೌಡಿ ಶೀಟರ್‌ಗಳ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದುದು, ಸಿಗರೇಟ್ ಸೇದುತ್ತಿದ್ದ ಪೋಟೋ ವೈರಲ್ ಆಗಿ ಭಾರಿ ಚರ್ಚೆಯಾಗಿತ್ತು. ಬಳಿಕ ಜೈಲಾಧಿಕಾರಿಗಳು, ಕಠಿಣ ಕ್ರಮ ಕೈಗೊಂಡು, ಇದಕ್ಕೆಲ್ಲ ಬ್ರೇಕ್ ಹಾಕಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಸುಪ್ರೀಂ ಕೋರ್ಟ್ ಕೂಡ ಈ ವಿಚಾರದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಅದರೆ ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಮುಂದುವರಿದಿದ್ದು ಗೃಹಸಚಿವರು ಕಣ್ಮುಚ್ಚಿ ಕುಳಿತಿದ್ದಾರೆ.

