ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ಆಗಿದ್ದಂತಹ ರಸ್ತೆಗುಂಡಿಗಳನ್ನು ನಾವು ಮುಚ್ಚುತ್ತಿದ್ದೇವೆ. ಆರ್.ಅಶೋಕ್ ಅವರಿಗೆ ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ ಸಣ್ಣ ಪಿಲ್ಲರ್ ಕೂಡ ಹಾಕಲು ಆಗಲಿಲ್ಲ, ಒಂದೇ ಒಂದು ಮೇಲ್ಸೇತುವೆಯನ್ನೂ ಮಾಡಲಿಲ್ಲ. ನಿಮ್ಮ ಕೈಯಲ್ಲಿ ಏನೂ ಮಾಡಲು ಆಗಲಿಲ್ಲ ಎಂದೇ ಜನರು ನಮ್ಮ ಕೈಗೆ ಅಧಿಕಾರ ಕೊಟ್ಟಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಬೆಂಗಳೂರಿಗೆ ಒಂದೇ ಒಂದು ರೂಪಾಯಿ ಅನುದಾನ ಕೊಡಿಸಿದ್ದಾರೆಯೇ? ಬಿಜೆಪಿಯವರು ಏನೇನೂ ಮಾಡಿಲ್ಲ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.
ಎಲ್ಲೆಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆಯೋ ಅಲ್ಲಿಗೆ ಆಯಾಯ ಕ್ಷೇತ್ರದ ಶಾಸಕರು ತೆರಳಿ ಪರಿಶೀಲನೆ ನಡೆಸಲಿ. ಅವರುಗಳೇ ಪರಿಶೀಲನೆ ನಡೆಸಿ ಗುಂಡಿಗಳನ್ನು ಮುಚ್ಚಿಸಿಕೊಳ್ಳಲಿ. ಅಧಿಕಾರಿಗಳು ಅವರಿಗೂ ಗೌರವ ನೀಡುತ್ತಾರೆ. ನಾವು ಇದಕ್ಕೆ ಬೇಡ ಎಂದು ಹೇಳುತ್ತೇವೆಯೇ?” ಎಂದರು.
ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಲು ಆಗುವುದಿಲ್ಲ. ಗುಂಡಿಗಳ ಸುತ್ತಲು ಕತ್ತರಿಸಿ ಸರಿಯಾಗಿ ಜಲ್ಲಿ ತುಂಬಿ ನಂತರ ರೋಡ್ ರೋಲರ್ ಮೂಲಕ ದುರಸ್ಥಿ ಮಾಡಬೇಕಾಗುತ್ತದೆ. ಬಿಜೆಪಿಯವರು ಪ್ರತಿಭಟನೆ ವೇಳೆ ಗುಂಡಿ ತುಂಬಿದಂತೆ ಮಾಡಲು ಆಗುವುದಿಲ್ಲ” ಎಂದು ಹೇಳಿದರು.
ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ತಿಳಿಸಿ ಎಂದು ಸರ್ಕಾರದಿಂದ ರಸ್ತೆಗುಂಡಿ ಗಮನ ಎನ್ನುವ ಅಪ್ಲಿಕೇಶನ್ ಮೂಲಕ ನಾವೇ ಸಾರ್ವಜನಿಕರಿಗೆ ಕರೆಕೊಟ್ಟಿದ್ದೆವು. ಅಧಿಕಾರಿಗಳು ಗುಂಡಿಗಳನ್ನು ಮುಚ್ಚದೇ ಇರಬಹುದು ಆದರೆ ಜನರೇ ಜಾಗೃತರಾಗಿ ಮಾಹಿತಿ ನೀಡಿ ಎಂದು ಹೇಳಿದ್ದೆವು. ಸಾವಿರಾರು ಜನರು ಜಾಗಗಳನ್ನು ಗುರುತಿಸಿ ಫೋಟೋಗಳನ್ನು ಕಳುಹಿಸಿದ್ದಾರೆ. ಜೊತೆಗೆ ಸಂಚಾರಿ ಪೊಲೀಸರು ತಿಳಿಸಿದ ಜಾಗಗಳಲ್ಲಿಯೂ ಸಹ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸವಾಗುತ್ತಿದೆ. ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ” ಎಂದರು.
Post Views: 5

