postviews: 9
ಬೆಂಗಳೂರು: ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ ಜನರಲ್ಲಿ ಅನಕ್ಷರತೆ, ಬಡತನ, ಜಮೀನು ಇತ್ಯಾದಿಗಳಿಲ್ಲ ಎಂಬುದರ ಮಾಹಿತಿ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಅವರ ಆರೋಗ್ಯ ಉತ್ತಮವಾಗಿದೆ ಎಂದರು. ಇದನ್ನೂ ಓದಿ: ಬಿಜೆಪಿಯ ಆತ್ಮವಂಚನೆಯ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದ ಜನತೆಗೆ ನಾಡಹಬ್ಬ ದಸರಾದ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿಗಳು, ನಾಳೆ ಮೈಸೂರಿನಲ್ಲಿ ನಡೆಯಲಿರುವ ದಸರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಭಾಗಿಯಾವುದಾಗಿ ತಿಳಿಸಿದರು.
ಉತ್ತರಕರ್ನಾಟಕದಲ್ಲಿ ಹೆಚ್ಚು ಪ್ರವಾಹ
ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ, ಉತ್ತರ ಕರ್ನಾಟಕದ ಸುಮಾರು 9 ಜಿಲ್ಲೆಗಳಲ್ಲಿ ಶೇ.95 ರಷ್ಟು ಪ್ರವಾಹ ಸಂಭವಿಸಿದೆ. ಬೆಳಗಾವಿ, ವಿಜಾಪುರ, ಬಾಗಲಕೋಟೆ, ಬೀದರ್, ಯಾದಗಿರಿ, ರಾಯಚೂರು, ಹುಬ್ಬಳ್ಳಿ ಧಾರವಾಡ, ಗದಗ ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿದೆ ಎಂದರು.
ಕೇಂದ್ರದ ಪ್ರವಾಹಪರಿಹಾರ ಕೊಡಿಸಲಿ
ಕೇಂದ್ರಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಪ್ರವಾಹ ಪರಿಹಾರವನ್ನು ಕೇಂದ್ರದಿಂದ ಕೊಡಿಸುವುದಾಗಿ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಆದರೆ 2023ರಲ್ಲಿ ರಾಜ್ಯಕ್ಕೆ ಬರಗಾಲ ಬಂದಿದ್ದಾಗ, ಕೇಂದ್ರಸರ್ಕಾರದವರು ಬರಪರಿಹಾರ ನೀಡದೇ, ಸುಪ್ರೀಂಕೋರ್ಟ್ ನ ಬಳಿ ಧಾವಿಸಿ, ಪರಿಹಾರ ತೆಗೆದುಕೊಳ್ಳುವಂತಾಯಿತು. ಪ್ರಸ್ತುತ ಕುಮಾರಸ್ವಾಮಿಯವರು ಪರಿಹಾರ ಕೊಡಿಸುವುದಾದರೆ ಪ್ರಸ್ತಾವನೆಯನ್ನು ರಾಜ್ಯಸರ್ಕಾರ ಸಲ್ಲಿಸುವುದು ಎಂದರು.
ಕೇಂದ್ರಸರ್ಕಾರವೂ ಜಾತಿಗಣತಿಗೆ ಮುಂದಾಗಿದೆ
ಈ ಸಮೀಕ್ಷೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಿಳಿಸಿದಂತೆ ಅಸಮಾನತೆ ಹೋಗಲಾಡಿಸಲು ದುರ್ಬಲರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಮಾಜದಲ್ಲಿ ಅಸಮಾನತೆ ನಿರಂತರವಾಗಿರಬೇಕು ಎಂಬುದು ಬಿಜೆಪಿಯವರ ಬಯಕೆ. ನಿರ್ದಿಷ್ಠವಾದ ಜಾತಿಯೊಂದು ಉತ್ತುಂಗದಲ್ಲಿರಬೇಕೆಂದು ಬಿಜೆಪಿ ಬಯಸುತ್ತದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರ್ಕಾರವೂ ಜಾತಿಗಣಿತಿ ನಡೆಸಲು ಮುಂದಾಗಿದೆ ಎಂದರು.

